ಚೇಂಬರ್ಲಿನ್, (ಆಥರ್) ನೆವಿಲ್
1869-1940. ಬ್ರಿಟಿಷ್ ರಾಜಕಾರಣಿ. 1937ರಿಂದ 1940ರವರೆಗೆ ಬ್ರಿಟನ್ನಿನ ಪ್ರಧಾನಮಂತ್ರಿಯಾಗಿದ್ದ. ಎರಡನೆಯ ಮಹಾಯುದ್ಧಕ್ಕೆ ಸ್ವಲ್ಪ ಮುಂಚೆ ಜರ್ಮನಿಯ ಮನವೊಲಿಸುವ ರಾಜನೀತಿಯ ಪುರಸ್ಕøತರೆಂದು ಹೆಸರು ಪಡೆದ ಬ್ರಿಟಿಷ್ ರಾಜಕಾರಣಿಗಳಲ್ಲಿ ಅಗ್ರಗಣ್ಯನೆಂದು ಪರಿಗಣಿತನಾದ. ಜನನ 1869ರ ಮಾರ್ಚ್ 18ರಂದು, ಬರ್ಮಿಂಗ್‍ಹ್ಯಾಮ್ ಪ್ರದೇಶದ ಎಚ್‍ಬ್ಯಾಸ್ಟನಿನಲ್ಲಿ. ತಂದೆ ಪ್ರಖ್ಯಾತ ರಾಜಕಾರಣಿ ಜೋಸೆಫ್ ಚೇಂಬರ್ಲಿನ್, ಜೋಸೆಫ್‍ನ ಎರಡನೆಯ ಹೆಂಡತಿ ಫ್ಲಾರೆನ್ಸ್ ಕೆನ್ರಿಕ್ ಇವನ ತಾಯಿ. ಮಗ ವಾಣಿಜ್ಯ ವ್ಯವಹಾರಗಳಿಗೆ ತರಬೇತು ಪಡೆಯಬೇಕೆಂಬುದು ತಂದೆಯ ಉದ್ದೇಶ. ಆದ್ದರಿಂದ ಇವನ ವಿದ್ಯಾಭ್ಯಾಸ ಬರ್ಮಿಂಗ್‍ಹ್ಯಾಮ್‍ನ ರಗ್ಬೀ ಮತ್ತು ಮೇಸನ್ ಕಾಲೇಜುಗಳಲ್ಲೂ ಆನಂತರ ಅಲ್ಲಿಯ ವಿಶ್ವವಿದ್ಯಾಲಯದಲ್ಲೂ ನಡೆಯಿತು. ಆಮೇಲೆ ಇವನು ತಂದೆಯ ಆಸ್ತಿಯಾಗಿದ್ದ ತೋಟವನ್ನು ಅಭಿವೃದ್ಧಿಗೊಳಿಸಲು ಬಹುಮದಲ್ಲಿಯ ಆ್ಯಂಡ್ರೋಸ್ ದ್ವೀಪಕ್ಕೆ ಹೋಗಿ ಅಲ್ಲಿ ಏಳು ವರ್ಷಕಾಲ ಈತ ಏಕಾಕಿಯಾಗಿ ಶ್ರಮಿಸಿದ. ಆದರೆ ಯಶಸ್ಸೇನೂ ಸಿಗಲಿಲ್ಲ. 1897ರಲ್ಲಿ ಮರಳಿದ ನೆವಿಲ್ ಬರ್ಮಿಂಗ್‍ಹ್ಯಾಮಿನಲ್ಲಿ ವ್ಯಾಪಾರ ಪ್ರಾರಂಭಿಸಿದ. ಅಲ್ಲಿ ಈತನಿಗೆ ಯಶಸ್ಸು ಸಿಗತೊಡಗಿತು. ಇವನು ಎರಡು ಚಿಕ್ಕವಾದ ಲೋಹ ವ್ಯವಹಾರ ಅಂಗಡಿಗಳ ಮುಖ್ಯಸ್ಥನಾದ. ವಾಣಿಜ್ಯ ಸಂಘದ ಕಲಾಪಗಳಲ್ಲಿ ಭಾಗವಹಿಸಿದ. ಸಾರ್ವಜನಿಕ ಆಸ್ಪತ್ರೆಯ ಅಧ್ಯಕ್ಷನಾದ. 1911ರಲ್ಲಿ ನಗರ ಪರಿಷತ್ತಿನಲ್ಲಿ ಸೇರಿ 1915ರಲ್ಲಿ ಲಾರ್ಡ್ ಮೇಯರ್ ಪದವಿಗೇರಿದ. ಬರ್ಮಿಂಗ್‍ಹ್ಯಾಮಿನ ಮುನಿಸಿಪಲ್ ಸೇವಿಂಗ್ಸ್ ಬ್ಯಾಂಕ್ (1916) ಈತನ ಸಾಧನೆಗಳಲ್ಲೊಂದು.

	ಆಗ ಬ್ರಿಟಷ್ ಪ್ರಧಾನಮಂತ್ರಿಯಾಗಿದ್ದ ಡೇವಿಡ್ ಲಾಯ್ಡ್ ಜಾರ್ಜ್ ಇವನ್ನು 1916ರಲ್ಲಿ ಡೈರೆಕ್ಟರ್ ಜನರಲ್ ಆಫ್ ನ್ಯಾಷನಲ್ ಸರ್ವಿಸ್ ಆಗಿ ನೇಮಕಮಾಡಿ ಲಂಡನ್ನಿಗೆ ಆಹ್ವಾನಿಸಿದ. ಆದರೆ ಈ ಸ್ಥಾನಕ್ಕೆ ಸಾಕಷ್ಟು ಅಧಿಕಾರಿಗಳಿರದ ಕಾರಣ ಚೇಂಬರ್ಲಿನ್ ಕೇವಲ ಏಳು ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟ. ಈ ಘಟನೆಯಿಂದ ಉಂಟಾದ ವಿರಸ ಕೊನೆಯವರೆಗೂ ಈ ಇಬ್ಬರು ರಾಜಕಾರಣಿಗಳ ನಡುವೆ ಉಳಿದುಕೊಂಡು ಬಂತು.

	1918ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ತನ್ನ 50ನೆಯ ವಯಸ್ಸಿನಲ್ಲಿ, ಬರ್ಮಿಂಗ್‍ಹ್ಯಾಮಿನ ಲೇಡಿವುಡ್ ವಿಭಾಗದಿಂದ ಕನ್ಸರ್‍ವೇಟಿವ್ ಪಕ್ಷದ ಉಮೇದುವಾರನಾಗಿ ಚೇಂಬರ್ಲಿನ್ ಆಯ್ಕೆ ಹೊಂದಿದ. 1922ರಲ್ಲಿ ಲಾಯ್ಡ್ ಚಾರ್ಜನ ಸಮ್ಮಿಶ್ರ ಸರ್ಕಾರ ಪತನ ಹೊಂದಿದಾಗ ಚೇಂಬರ್ಲಿನ್ ಮಲಸೋದರನೂ ರಾಜಕಾರಣಿಯೂ ಆದ ಅಸ್ಟಿನನಿಂದ ತಾತ್ಪೂರ್ತಿಕವಾಗಿ ದೂರ ಸರಿದ. ಆಂಡ್ರ್ಯೂ ಬೋನಾರ್ ಲಾ ರಚಿಸಿದ ಕನ್ಸರ್‍ವೆಟಿವ್ ಪಕ್ಷದ ಸರ್ಕಾರದಲ್ಲಿ ಪೋಸ್ಟ್‍ಮಾಸ್ಟರ್ ಜನರಲ್ ಹುದ್ದೆ ಇವನಿಗೆ ಲಭಿಸಿತು. 1923ರ ಫೆಬ್ರವರಿಯಲ್ಲಿ ಚೇಂಬರ್ಲಿನ್ ಆರೋಗ್ಯಮಂತ್ರಿಯಾಗಿ ಬ್ರಿಟಿಷ್ ಸಂಪುಟವನ್ನು ಸೇರಿದ. ಅದೇ ವರ್ಷದ ಆಗಸ್ಟ್‍ನಲ್ಲಿ ಸ್ಟ್ಯಾನ್ಲಿ ಬಾಲ್ಡ್‍ವಿನನ ಸರ್ಕಾರದಲ್ಲಿ ಅರ್ಥಮಂತ್ರಿ ಪದವಿ ಪ್ರಾಪ್ತವಾಯಿತು. ಆದರೆ ಮುಂದಿನ ಜನವರಿಯಲ್ಲಿ ಆ ಸರ್ಕಾರ ಬಿದ್ದುಹೋಯಿತು. 1924ರ ನವೆಂಬರ್‍ನಲ್ಲಿ ಕನ್ಸರ್‍ವೆಟಿವ್ ಪಕ್ಷ ಮಾತ್ರ ಅಧಿಕಾರಕ್ಕೆ ಬಂದಾಗ ಚೇಂಬರ್ಲಿನ್ ಮತ್ತೆ ಆರೋಗ್ಯಮಂತ್ರಿಯಾದ. ಅನೇಕ ಪ್ರಗತಿಪರ ಅಧಿನಿಯಮಗಳ ಜಾರಿಗೆ ಈತ ಕಾರಣನಾದ್ದರಿಂದ ಬಾಲ್ಡ್‍ವಿನನ ಅನಂತರದ ನಾಯಕತ್ವ ಈತನಿಗೆ ಸ್ಥಿರವಾಯಿತು. 1930ರಲ್ಲಿ ಪಕ್ಷದ ಅಧ್ಯಕ್ಷನಾಗಿ ಈತ ಕನ್ಸರ್‍ವೆಟಿವ್ ಪಕ್ಷದ ಕೇಂದ್ರೀಯ ಕಾರ್ಯಾಲಯವನ್ನು ಪುನಃ ಸಂಘಟಿಸಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡ.

	ಬಾಲ್ಡ್‍ವಿನನ ಬಲಗೈಯಂತೆ ಕೆಲಸ ಮಾಡಿದ ಚೇಂಬರ್ಲಿನ್ 1931ರ ಆಗಸ್ಟ್‍ನಲ್ಲಿ ರ್ಯಾಮ್ಸೆ ಮ್ಯಾಕ್ಡೊನಾಲ್ಡನ ರಾಷ್ಟ್ರೀಯ ಸರ್ಕಾರವನ್ನು ರೂಪಿಸುವುದರಲ್ಲಿ ವಹಿಸಿದ ಪಾತ್ರ ಬಹು ಮಹತ್ತ್ವದ್ದು. ಅದರಲ್ಲಿ ಈತನಿಗೆ ಆರೋಗ್ಯಮಂತ್ರಿಸ್ಥಾನ ದೊರಕಿತು. 1931ರ ಆಕ್ಟೋಬರ್‍ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂತು. ಚೇಂಬರ್ಲಿನ್ ಅರ್ಥಮಂತ್ರಿಯಾದ. ಇಟಲಿ 1935ರಲ್ಲಿ ಅಬಿಸಿನಿಯದ ಆಕ್ರಮಣ ನಡೆಸಿದಾಗ ಇಟಲಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಚೇಂಬರ್ಲಿನ್ ಬೆಂಬಲ ನೀಡಿದನಾದರೂ 1936ರಲ್ಲಿ ಇಂಥ ನೀತಿಯನ್ನು ಬಿಡಬೇಕೆಂದು ಸಾರ್ವಜನಿಕವಾಗಿ ಘೋಷಿಸಿದ ಮಂತ್ರಿಗಳಲ್ಲಿ ಈತನೆ ಮೊದಲಿಗ.

	1937ರ ಆಗಸ್ಟ್ 28ರಂದು ಬಾಲ್ಡ್‍ವಿನನ ಸ್ಥಾನದಲ್ಲಿ ಚೇಂಬರ್ಲಿನ್ ಪ್ರಧಾನಮಂತ್ರಿಯಾದ. ಈತನ ಪ್ರಧಾನಮಂತ್ರಿತ್ವದ ಅವಧಿಯಲ್ಲಿ ಯೂರೋಪಿನಲ್ಲಿ ಹಿಟ್ಲರನ ಜರ್ಮನಿಯ ಆಕ್ರಮಣ ಮನೋಭಾವ ತುಂಬ ಪ್ರಬಲವಾಯಿತು. ಆಕ್ರಮಣವನ್ನು ರಾಜಕೀಯ ಮಾತುಕತೆಗಳ ಮೂಲಕ ಸೀಮಿತಗೊಳಿಸುವ ಉದ್ದೇಶದಿಂದ ಚೇಂಬರ್ಲಿನ್ ಪ್ರಧಾನಮಂತ್ರಿಗೆ ಅಸಹಜವೆನಿಸುವಷ್ಟು ಅತಿಯಾಗಿ ವೈಯಕ್ತಿಕವಾಗಿ ಭಾಗವಹಿಸಿದ. ಪ್ರಬಲವಾದ ಜರ್ಮನಿಯ ಬೇಡಿಕೆಗಳಿಗೆ ಮನ್ನಣೆ ನೀಡಿ ಅದನ್ನು ಶಮನಗೊಳಿಸುವ ನೀತಿ ಆಗ ಪ್ರಧಾನವಾಗಿತ್ತು. ಆ ಸಂದರ್ಭದಲ್ಲಿ ಚೇಂಬರ್ಲಿನ್ ಮೂರು ಸಲ ಜರ್ಮನಿಗೆ ಭೇಟಿ ಕೊಟ್ಟು ಚೆಕೊಸ್ಲೊವಾಕಿಯದ ಭಾಗಗಳಿಗಾಗಿ ಜರ್ಮನಿ ಹಾಕುತ್ತಿದ್ದ ಒತ್ತಡಗಳನ್ನು ತಡೆಯಲು ಉದ್ದೇಶಿಸಿದ. 1937ರ ಸೆಪ್ಟೆಂಬರಿನಲ್ಲಿ ಆದ ಮ್ಯೂನಿಚ್ ಒಪ್ಪಂದದ ಫಲವಾಗಿ ಹಿಟ್ಲರನ ಬೇಡಿಕೆಗಳಿಗೆ ಮನ್ನಣೆ ಲಭಿಸಿತು. ಚೆಕೊಸ್ಲೊವಾಕಿಯಕ್ಕೆ ರಕ್ಷಣೆ ಇಲ್ಲದಂತಾಯಿತು.

	ಚೇಂಬರ್ಲಿನ್ ತಾತ್ಕಾಲಿಕವಾಗಿ ಗೆದ್ದವನಂತೆ ಮರಳಿದನಾದರೂ ಕೂಡಲೇ ಆತ ಪ್ರಾರಂಭಿಸಿದ ಶಸ್ತ್ರಸನ್ನಾಹ ಕಾರ್ಯಕ್ರಮದಿಂದಾಗಿ ಆ ಒಪ್ಪಂದದಿಂದ ಪಡೆದಿದ್ದ ಅಸ್ಥಿರ ಶಾಂತಿಯ ಅತಂತ್ರತೆ ಎಲ್ಲರಿಗೂ ಅರ್ಥವಾಗುವಂತಿತ್ತು. 1939ರ ಮಾರ್ಚ್ 15ರಂದು ಹಿಟ್ಲರ್ ಚೆಕೊಸ್ಲೊವಾಕಿಯದ ಉಳಿದ ಭಾಗಗಳನ್ನೂ ಕಬಳಿಸಿದ. ಚೇಂಬರ್ಲಿನ್ ಕೂಡಲೇ ಜರ್ಮನ್ ಶಮನ ನೀತಿಯನ್ನು ತ್ಯಜಿಸಿದ. ಆಕ್ರಮಣದ ವಿರುದ್ಧ ಪೋಲೆಂಡಿಗೆ ಬ್ರಿಟಿಷ್ ರಕ್ಷಣೆಯ ಆಶ್ವಾಸನೆ ನೀಡಿದ. ಬ್ರಿಟನ್ನಿನಲ್ಲಿ ಕಡ್ಡಾಯ ಸೈನಿಕ ಭರ್ತಿ ಆರಂಭವಾಯಿತು. ಹಿಟ್ಲರನಿಗೆ ಎಚ್ಚರಿಕೆ ನೀಡಿ ಅವನ ಆಕ್ರಮಣವನ್ನು ತಡೆಯುವ ಪ್ರಯತ್ನಗಳೊಂದಿಗೆ ಯುದ್ಧಸನ್ನಾಹವೂ ಚೇಂಬರ್ಲಿನನ ಗಮನ ಸೆಳೆದುವು. ಯುದ್ಧ ಅನಿವಾರ್ಯವಾದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಸೋವಿಯತ್ ದೇಶಗಳು ಒಂದಾಗಿ ಹೋರಾಡುವ ಒಪ್ಪಂದದ ಪ್ರಯತ್ನಗಳು ಪ್ರಾರಂಭವಾದವು. ಈ ನಡುವೆ ಆಗಸ್ಟ್ 23ರಂದು ಸೋವಿಯತ್-ಜರ್ಮನ್ ಒಪ್ಪಂದದಿಂದ ಚೇಂಬರ್ಲಿನ್ನನ ಈ ನೀತಿಗೆ ಧಕ್ಕೆ ತಗುಲಿತು. ಸೆಪ್ಟೆಂಬರ್ 1ರಂದು ಪೋಲೆಂಡಿನ ಮೇಲೆ ಜರ್ಮನಿ ಆಕ್ರಮಣ ನಡೆಸಿತು. ಸೆಪ್ಟೆಂಬರ್ 3ರಂದು ಚೇಂಬರ್ಲಿನ್ ಜರ್ಮನಿಯ ಮೇಲೆ ಯುದ್ಧ ಸಾರಿದ.

	ಯುದ್ಧದ ಆರಂಭದ ದಿನಗಳಲ್ಲಿ ಚರ್ಚಿಲರನ್ನು ಸಂಪುಟದಲ್ಲಿ ಸೇರಿಸಿಕೊಂಡು ಅದನ್ನು ಸುಧಾರಿಸಲು ಚೇಂಬರ್ಲಿನ್ ಯತ್ನ ನಡೆಸಿದ. ಲಿಬರಲ್ ಸದಸ್ಯರು ಅವನ ಸರ್ಕಾರದಲ್ಲಿ ಸೇರಲು ನಿರಾಕರಿಸಿದರು. 1940ರ ಏಪ್ರಿಲ್‍ನಲ್ಲಿ ಕೈಗೊಂಡ ಬ್ರಿಟಿಷ್ ಕಾರ್ಯಾಚರಣೆ ವಿಫಲವಾಗಿ ಚೇಂಬರ್ಲಿನ್ ನೀತಿಯ ಬಗ್ಗೆ ಸಂಸತ್ತಿನಲ್ಲಿ ತೀವ್ರ ಚರ್ಚೆಯಾಗಿ ಅನೇಕ ಕನ್ಸರ್‍ವೆಟಿವ್ ಸದಸ್ಯರೇ ಅವನಿಗೆ ಬೆಂಬಲ ನೀಡದೆ ಹೋದಾಗ ಚೇಂಬರ್ಲಿನ್ ಪ್ರಧಾನಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದ (ಮೇ 10). ಮುಂದೆ ಚರ್ಚಿಲನ ಸಮ್ಮಿಶ್ರ ಸರ್ಕಾರದಲ್ಲಿ ಅವನು ಕೌನ್ಸಿಲನ ಲಾರ್ಡ್‍ನ ಪ್ರೆಸಿಡೆಂಟ್ ಆಗಿ ಸ್ವಲ್ಪ ಕಾಲ ಮುಂದುವರಿದ. ಮುಂದೆ ಅನಾರೋಗ್ಯದ ಕಾರಣದಿಂದ ಅಧಿಕಾರಕ್ಕೂ ಕನ್ಸರ್‍ವೆಟಿವ್ ಪಕ್ಷದ ನಾಯಕತ್ವಕ್ಕೂ ರಾಜೀನಾಮೆ ಕೊಡಬೇಕಾಯಿತು. 1940ರ ನವೆಂಬರ್ 9ರಂದು ನೆವಿಲ್ ಚೇಂಬರ್ಲಿನ್ ಮೃತನಾದ.

	ಚೇಂಬರ್ಲಿನ್ ತೋರಿಕೆಗೆ ಸ್ವಲ್ಪ ಬಿರುಸು; ಅವನ ಮುಖದಲ್ಲಿ ವಿಷಣ್ಣತೆಯಿರುತ್ತಿತ್ತು. ಆದರೆ ಆತನೊಬ್ಬ ಸಮರ್ಥ ಕಾರಭಾರಿ. ಅತ್ಯಂತ ಸ್ಪಷ್ಟ ವಿಚಾರಿ, ರೀತಿ ರಿವಾಜಿನಲ್ಲಿ ಸ್ವಲ್ಪ ಶ್ರೀಮಂತಿಕೆಯ ದರ್ಪವಿತ್ತು. ತನಗಿಂತ ಕಡಿಮೆ ಬುದ್ಧಿಯವರನ್ನು ಕಂಡರೆ ಅವನಿಗೆ ಅಸಹನೆ. ಆದರೆ ಆತನ ರಾಜಕೀಯ ನೀತಿಯನ್ನು ವಿರೋಧಿಸುತ್ತಿದ್ದವರಂತೆಯೇ ಸಮರ್ಥಿಸುತ್ತಿದ್ದವರೂ ಉಂಟು. 1940ರಲ್ಲಿ ಚರ್ಚಿಲ್ ತನ್ನ ಉತ್ತರಾಧಿಕಾರಿಯಾಗಬೇಕೆಂದು ಚೇಂಬರ್ಲಿನ್ ಬೆಂಬಲ ನೀಡಿದ. ಇದರಲ್ಲಿ ಅವನ ಔದಾರ್ಯ ವ್ಯಕ್ತವಾಗುತ್ತದೆ.										(ಜಿ.ಆರ್.ಪಿ.)